Slider

ಫೇಸ್ ಬುಕ್ ಸಕ್ರಿಯ ಬಳಕೆದಾರರು ಕಡಿಮೆ ಆಗಿದ್ದೇಕೆ?

ಅದು 2007ರ ಸಮಯ ಇರಬೇಕು.  ಆಗ ಒರ್ಕುಟ್ ಭಾರತ ಮತ್ತು ಬ್ರೆಜಿಲ್ ಅಲ್ಲಿ ಬಹು ಜನಪ್ರಿಯವಾಗಿತ್ತು. ಇನ್ನೊಂದು ಕಡೆ ಮೈಸ್ಪೇಸ್ ಎಂಬ ಸೋಶಿಯಲ್ ಮಿಡಿಯಾ ಅಮೇರಿಕಾದಲ್ಲಿ ಜನಪ್ರಿಯ ಆಗಿತ್ತು. ಫೇಸ್ ಬುಕ್ ಆಗಿನ್ನೂ ಪ್ರವರ್ಧಮಾನಕ್ಕೆ ಬರುತ್ತಿರುವ ಸಮಯ.

ಕ್ರಮೇಣ ಗೂಗಲ್ 2014ರ ಸುಮಾರಿಗೆ ಒರ್ಕುಟ್ ಅನ್ನು ಮುಚ್ಚುವ ಮಟ್ಟಿಗೆ ಫೇಸ್ ಬುಕ್ ಭಾರತದಲ್ಲಿ ಜನಪ್ರಿಯ ಆಯ್ತು. ಮೈಸ್ಪೇಸ್ ಮುಚ್ಚದಿದ್ದರೂ ಆರಕ್ಕೇಳಲಿಲ್ಲ. ಈಗಲೂ ಅದು ಒಂದು ತಾಣವಾಗಿ ಸಕ್ರಿಯ ಆಗಿದೆ.

ಈಗ ಫೇಸ್ ಬುಕ್ ಭಾರತದ ನಂಬರ್ ೧ ಸೋಷಿಯಲ್ ಮಿಡಿಯಾ ಎಪ್ ಅಂದರೆ ತಪ್ಪಿಲ್ಲ.

ಆದರೆ ಇತ್ತೀಚೆಗೆ ಫೇಸ್ ಬುಕ್ ಸಕ್ರಿಯ ಬಳಕೆದಾರರು ಅತಿ ಸ್ವಲ್ಪ ಪ್ರಮಾಣದಲ್ಲಿ ಪ್ರಪಂಚಾದ್ಯಂತ ಕಡಿಮೆ ಆಗಿದ್ದಾರೆ.  193 ಕೋಟಿಯಿಂದ 192.9 ಕೋಟಿ ಗೆ ಇಳಿದಿದೆ. ಇದು ಫೇಸ್ ಬುಕ್ ನ 17 ವರ್ಷದ ಇತಿಹಾಸದಲ್ಲಿ ಮೊಟ್ಟ ಮೊದಲು ಆಗಿರುವದು.

ಅಷ್ಟೇ ಅಲ್ಲ ಫೇಸ್ ಬುಕ್ ನ ಮಾತೃ ಕಂಪನಿಯಾದ ಮೆಟಾದ ಲಾಭ 1028 ಕೋಟಿ ಡಾಲರ್ ಡಿಸೆಂಬರ್ 2021 ಕಾಲುವರ್ಷ ದಲ್ಲಿ ಮಾಡಿದೆ. ಕಳೆದ ವರ್ಷದ ಡಿಸೆಂಬರ್ 2020 ರ ಕಾಲು ವರ್ಷದ ಲಾಭ 1121 ಕೋಟಿ ಡಾಲರ್ ಆಗಿತ್ತು. ಅಂದರೆ 8% ಲಾಭ ಕಡಿಮೆ ಆಗಿದೆ.

ಈ ಸುದ್ದಿ ಹೊರಬಂದದ್ದೇ ತಡ ಫೇಸ್ ಬುಕ್ ನ ಮಾತೃ ಕಂಪನಿಯಾದ ಮೆಟಾ ಶೇರ್ ನ ಬೆಲೆ ಸ್ಟಾಕ್ ಮಾರ್ಕೆಟ್ ಅಲ್ಲಿ 323 ಡಾಲರ್ ನಿಂದ 231 ಡಾಲರ್ ಗೆ ಫೆಬ್ರವರಿ ೪ ೨೦೨೨ ರಂದು ಡಮಾರ್ ಅಂತ ಬಿತ್ತು. ಅಂದರೆ ಸುಮಾರು 28% ಬಿತ್ತು.

ಹೀಗೆ ಆಗುತ್ತೆ ಅನ್ನುವ ಹಲವು ಸುಳಿವು ಮೊದಲಿನಿಂದ ಇತ್ತು. ಯಾಕೆಂದರೆ ಯಾವುದೇ ಪ್ರಾಡಕ್ಟ್ ಮಾರುಕಟ್ಟೆಯಲ್ಲಿ ಒಂದಲ್ಲ ಒಂದು ದಿನ ಸೆಚುರೇಶನ್ ಆಗಲೇ ಬೇಕು. ಅಷ್ಟೇ ಅಲ್ಲ ಎಪ್ರಿಲ್ ೨೦೨೧ರಲ್ಲಿ ಪ್ರಕಟವಾದ ರಿಸರ್ಚ್ ರಿಪೋರ್ಟ್ ಪ್ರಕಾರ ಅಮೇರಿಕಾದಲ್ಲಿ 30 ವರ್ಷಕ್ಕಿಂತ ಕಡಿಮೆಯ ವಯಸ್ಸಿನವರಲ್ಲಿ ಇನ್ಸ್ಟಾಗ್ರಾಂ, ಸ್ನ್ಯಾಪ್ ಚಾಟ್ ಹಾಗೂ ಟಿಕ್ ಟಾಕ್ ಜನಪ್ರಿಯ ಇರುವದು ಕಂಡು ಬಂದಿತ್ತು.

ಇನ್ಸ್ಟಾಗ್ರಾಂ, ವಾಟ್ಸ್ ಆಪ್ ಕೂಡಾ ಫೇಸ್ ಬುಕ್ ನ ಮಾತೃ ಕಂಪನಿ ಮೆಟಾ ದ್ದೇ!

ಭಾರತದಲ್ಲಿ ಇತ್ತೀಚೆಗೆ ಟೆಲೆಕಾಂ ದರ ಹೆಚ್ಚಿದ್ದು ಇದಕ್ಕೆ ಕಾರಣ ಎಂದು ಮೆಟಾ ಹೇಳಿದೆ. ಆದ್ರೆ ಅದರ ಜೊತೆ ಇನ್ನಿತರ ಕಾರಣಗಳು ಸಹ ಇವೆ. ಬನ್ನಿ ನೋಡೋಣ.

ನೆನಪಿಡಿ ಒಂದು ಹಂತದ ನಂತರ ಪ್ರಾಡಕ್ಟ್ ನ ಬೆಳವಣಿಗೆ ಅದು ಹೊಸ ಪೀಳಿಗೆಯನ್ನು ಎಷ್ಟು ಆಕರ್ಷಿಸುತ್ತಿದೆ ಎಂಬುದರ ಮೇಲೆ ಅವಲಂಬಿತವಾಗಿದೆ. ಇಂದು ಮಾರುಕಟ್ಟೆಯಲ್ಲಿ ಸೋಷಿಯಲ್ ಮಿಡಿಯಾ ಎಪ್ ಗಳ ದೊಡ್ಡ ಸಾಲೇ ಇದೆ. ಅಷ್ಟೇ ಅಲ್ಲ ಇತ್ತೀಚೆಗೆ ಹೊಸ ಪೀಳಿಗೆ ಸೋಷಿಯಲ್ ಮಿಡಿಯಾ ಅಷ್ಟೇ ಅಲ್ಲ ಬೇರೆ ಬೇರೆ ಕಡೆ ಕೂಡಾ ತಮ್ಮ ಅಮೂಲ್ಯ ಸಮಯ ಉಪಯೋಗಿಸುತ್ತಿದ್ದಾರೆ.

ಫೇಸ್ ಬುಕ್ ನ ಸಕ್ರಿಯ ಬಳಕೆದಾರರ ಸಂಖ್ಯೆ ಕಡಿಮೆ ಆಗಲು ಟೆಲಿಕಾಂ ದರದ ಹೆಚ್ಚಳದ ಜೊತೆಗೆ, ಈ ಮುಂದಿನ ಹಲವು ಕಾರಣಗಳಿವೆ.

ಕಾರಣ ೧: ಜನಪ್ರಿಯವಾಗುತ್ತಿರುವ ಬೇರೆ ಸೋಷಿಯಲ್ ಮಿಡಿಯಾ ಎಪ್ ಗಳು


ಚಿತ್ರಕೃಪೆ:  Franck ಇಂದ Unsplash

ಚಿಕ್ಕ ಚಿಕ್ಕ ವಿಡಿಯೋ ತೋರಿಸುವ ಟಿಕ್ ಟಾಕ್ ಸೋಷಿಯಲ್ ಮಿಡಿಯಾ ಎಪ್ ನ ಜನಪ್ರಿಯತೆ ಪ್ರಪಂಚಾದ್ಯಂತ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. 

ಯೂಟ್ಯೂಬ್ ಕೂಡಾ ಶೋರ್ಟ್ಸ್ ಹಾಗೂ ಫೇಸ್ ಬುಕ್ ಕೂಡಾ ರೀಲ್ಸ್ ಎಂಬ ಫೀಚರ್ ಬಿಡುಗಡೆ ಮಾಡಿವೆ. ಭಾರತದಲ್ಲಿ ಟಿಕ್ ಟಾಕ್ ಬ್ಯಾನ್ ಆಗಿದೆ ನಿಜ. ಆದರೆ ಬೇರೆ ದೇಶಗಳಲ್ಲಿ ಅದರ ಜನಪ್ರಿಯತೆ ಹೆಚ್ಚುತ್ತಿದೆ. ಇನ್ಸ್ಟಾಗ್ರಾಂ ರೀಲ್ಸ್ ಕೂಡಾ ಜನಪ್ರಿಯ ಆಗುತ್ತಿದೆ.

ಭಾರತದಲ್ಲಿ ಟಿಕ್ ಟಾಕ್ ಹೋಲುವ ಟಕಾ ಟಕ್, ಜೋಶ್, ಮೋಜ್ ಹೀಗೆ ಹಲವು ಎಪ್ ಗಳಿದ್ದು ಅವೂ ಕೂಡಾ ಚಿಕ್ಕ ಚಿಕ್ಕ ಪಾಲನ್ನು ಹೊಂದಿವೆ. ಆದರೆ ಇಂತಹ ಯಾವ ಎಪ್ ಕೂಡಾ ಫೇಸ್ ಬುಕ್, ಇನ್ಸ್ಟಾಗ್ರಾಂ ಅಥವಾ ಯೂಟ್ಯೂಬ್ ತರಹ ಸಿಂಹ ಪಾಲು ಹೊಂದಿಲ್ಲ.

ಇನ್ನು ಸ್ನ್ಯಾಪ್ ಚ್ಯಾಟ್, ಟೆಲಿಗ್ರಾಂ, ಟ್ವಿಟ್ಟರ್ ಹೀಗೆ ಹಲವು ಸೋಶಿಯಲ್ ಮಿಡಿಯಾ ಎಪ್ ಗಳು ಮಾರುಕಟ್ಟೆಯಲ್ಲಿವೆ.

ಮುಂಚೆ ಜನರ ಕ್ವಾಲಿಟಿ ಟೈಮ್ ಪೂರ್ತಿ ಫೇಸ್ ಬುಕ್ ಗೆ ಸೀಮಿತ ಆಗಿತ್ತು. ಇಂದು ಹಂಚಿ ಹೋಗಿದೆ. ಈ ಹಿಂದೆ ಸೋಷಿಯಲ್ ಮಿಡಿಯಾ ಎಪ್ ಅನ್ನು ಜನ ತಮ್ಮ ಸ್ನೇಹಿತರೊಂದಿಗೆ ತಮ್ಮ ಕಥೆ ಹಂಚಲು ಬಳಸುತ್ತಿದ್ದರು. ಈಗ ಅದು ಕಡಿಮೆ ಆಗುತ್ತಿದೆ. ಈಗ ಚಿಕ್ಕ ಚಿಕ್ಕ ವಿಡಿಯೋ ನೋಡಲು ಜಾಸ್ತಿ ಬಳಕೆ ಮಾಡಲಾರಂಭಿಸಿದ್ದಾರೆ.

ವಾಟ್ಸ್ ಎಪ್, ಇನ್ಸ್ಟಾಗ್ರಾಂ ಈಗ ಜಾಸ್ತಿ ವೈಯಕ್ತಿಕ ಚಿತ್ರ ಹಂಚಿಕೆಗೆ ಬಳಕೆ ಆಗುತ್ತಿದೆ.

ಇದೂ ಕೂಡಾ ಫೇಸ್ ಬುಕ್ ಬಳಕೆ ಕಡಿಮೆ ಆಗಲು ಕಾರಣ.

ಕಾರಣ ೨: ಒಟಿಟಿ ಎಪ್ ಗಳು

ಚಿತ್ರಕೃಪೆ: Souvik Banerjee ಇಂದ Pixabay 

ಇಂದು ಯುವಕರಲ್ಲಿ ಒಟಿಟಿ ಎಪ್ ಗಳು ಹೆಚ್ಚು ಜನಪ್ರಿಯವಾಗುತ್ತಿವೆ. ಸಿನಿಮಾ, ಧಾರಾವಾಹಿಗಳು, ವೆಬ್ ಸಿರೀಸ್ ಗಳನ್ನು ನೋಡಲು ಯುವಜನರು ಇಚ್ಚಿಸುತ್ತಾರೆ. 

ಅದರಲ್ಲೂ ಕೊರೊನಾ ಸಮಯದಲ್ಲಿ ಈ ಒಟಿಟಿಗಳು ಕೇಬಲ್, ಡಿಟಿಎಚ್ ಗೆ ಸ್ಪರ್ಧೆ ನೀಡುವ ಮಟ್ಟಿಗೆ ಬೆಳೆಯುತ್ತಿವೆ.

ನೆಟ್ ಫ್ಲಿಕ್ಸ್, ಡಿಸ್ನಿ ಹಾಟ್ ಸ್ಟಾರ್, ಸೋನಿ ಲಿವ್, ಝೀ, ಸನ್ ನೆಕ್ಸ್ಟ್, ಎಂ ಎಕ್ಸ್, ಹೋಚಾಯಿ ಹೀಗೆ ಇವುಗಳ ಪಟ್ಟಿ ಬೆಳೆಯುತ್ತದೆ.

ಇವುಗಳಲ್ಲಿ ಯುವಜನತೆಯನ್ನು ಆಕರ್ಷಿಸುವ ಹೊಸ ಹೊಸ ಸಿನಿಮಾಗಳು, ಕಿರು ಚಿತ್ರಗಳು ದಂಡಿ ದಂಡಿಯಾಗಿವೆ. ಅದೂ ತೀರಾ ಒರ್ಗನೈಜ್ಡ್ ಆಗಿ. ಬಿಂಜ್ ವಾಚ್ ಮಾಡುತ್ತಾ ಕುಳಿತರೆ ಕಾಲಹರಣ ಆಗಿದ್ದೇ ಗೊತ್ತಾಗದು.

ಇದೂ ಕೂಡಾ ಫೇಸ್ ಬುಕ್ ಅಲ್ಲಿ ಜನ ಸಮಯ ಕಳೆಯುವದನ್ನು ಕಡಿಮೆ ಮಾಡುತ್ತಿದೆ.

ಕಾರಣ ೩: ಎಪಲ್ ನ ಕಠಿಣ ನಿಯಮಗಳು


 ಚಿತ್ರಕೃಪೆ:  Laurenz Heymann ಇಂದ Unsplash

ಇತ್ತೀಚೆಗೆ ಎಪಲ್ ತನ್ನ ಗೌಪ್ಯತಾ ನಿಯಮವನ್ನು ಇನ್ನಷ್ಟು ಬಿಗಿಗೊಳಿಸಿದ್ದು ಬಳಕೆದಾರರ ಮಾಹಿತಿಯನ್ನು, ಏನನ್ನು ನೋಡುತ್ತಾರೆ ಎಂಬ ಮಾಹಿತಿಯನ್ನು  ಬಳಸದಂತೆ ಅಪ್ಪಣೆ ಮಾಡಿದೆ. 

ಇದು ಫೇಸ್ ಬುಕ್ ಬಳಕೆದಾರರ ಆಸಕ್ತಿಯನ್ನು ಪತ್ತೆ ಮಾಡಿ ಜಾಹೀರಾತು ಹಾಗೂ ಕಂಟೆಂಟ್ ಸರ್ವ್ ಮಾಡುವದನ್ನು ಕಷ್ಟಕರ ಗೊಳಿಸುತ್ತದೆ. ಇದೂ ಒಂದು ಕಾರಣ ಇರಬಹುದು.

ಕಾರಣ ೪: ವ್ಲಾಗ್ಗಿಂಗ್ ಟ್ರೆಂಡ್


 ಚಿತ್ರಕೃಪೆ:  Tarun Savvy ಇಂದ Unsplash

ಇಂದು ವ್ಲಾಗ್ಗಿಂಗ್ ಎನ್ನುವದು ಇಡೀ ಪ್ರಪಂಚದಲ್ಲಿ ಅಪ್ ಟ್ರೆಂಡ್ ಅಲ್ಲಿದೆ. 

ಫೇಸ್ ಬುಕ್ ರೀಲ್ಸ್ ಎಂಬ ಚಿಕ್ಕ ವಿಡಿಯೋ ಫೀಚರ್ ನೀಡಿದೆ ನಿಜ. ಆದರೆ ಯೂಟ್ಯೂಬ್, ಇನ್ಸ್ಟಾಗ್ರಾಂ ಹಾಗೂ ಟಿಕ್ ಟಾಕ್ ಇವು ವ್ಲಾಗ್ಗಿಂಗ್ ಗೆ ಹೆಚ್ಚು ಬಳಕೆ ಆಗುತ್ತಿವೆ. ಫೇಸ್ ಬುಕ್ ಅಲ್ಲಿ ಫೀಚರ್ ಅನ್ನು ಸ್ವಲ್ಪ ಬದಲಾಯಿಸಿದರೆ ಯಾರಿಗೆ ಗೊತ್ತು ಕ್ಲಿಕ್ ಆಗಿ ಬಿಡಬಹುದು.

ಕಾರಣ ೫: ಮುಗಿಯುತ್ತಿರುವ ಕೊರೊನಾ ಸಾಂಕ್ರಾಮಿಕ

 ಚಿತ್ರಕೃಪೆ:   Fusion Medical Animation ಇಂದ Unsplash

ಎರಡು ವರ್ಷದ ಹಿಂದೆ ಕೊರೊನಾ ಸಾಂಕ್ರಾಮಿಕ ಬಂದಾಗ ಇಡೀ ಪ್ರಪಂಚಾದ್ಯಂತ ಜನ ಮನೆಯಲ್ಲಿ ಜಾಸ್ತಿ ಉಳಿಯುವ ಹಾಗೆ ಆಯ್ತು. ಆಗ ಜನ ಆನ್ ಲೈನ್ ಬಳಕೆ ಜಾಸ್ತಿ ಆಗಿತ್ತು. 

ಈಗ ಕ್ರಮೇಣ ಮುಂಚಿನ ಸ್ಥಿತಿ ಬರುವ ಹಾಗಿದೆ. ಸಂಕ್ರಮಣ ಸಧ್ಯದಲ್ಲೇ ಕಡಿಮೆ ಆಗುವ ಲಕ್ಷಣಗಳಿವೆ. ಜನ ಕೆಲಸಕ್ಕೆ ಮರಳುತ್ತಿರುವ ಕಾರಣ ಆನ್ ಲೈನ್ ಇರುವದು ಕಡಿಮೆ ಆಗಿ ಫೇಸ್ ಬುಕ್ ಗೂ ಸಹ ಇದು ಪರಿಣಾಮ ಬೀರಿದೆ.

ಕಾರಣ ೬: ಏಕತಾನತೆ

ಜನ ಬದಲಾವಣೆ ಬಯಸುತ್ತಾರೆ. ಫೇಸ್ ಬುಕ್ ಒಂದೇ ಬಳಸಿ ಬಳಸಿ ಏಕತಾನತೆಯಿಂದ ಬೋರಾಗಿ ಬೇರೆ ಕಡೆ ಹೋಗಿರುವ ಸಾಧ್ಯತೆ ಇದೆ. ಆದರೆ ಫೇಸ್ ಬುಕ್ ಎಐ ಬಳಸುವದರಿಂದ ಜನರ ಅರಿತು ಬದಲಾಗುವ ಎಲ್ಲ ಶಕ್ತಿ ಫೇಸ್ ಬುಕ್ ಎಪ್ ಗೆ ಇದೆ.

ಇತ್ತೀಚೆಗೆ ಅಕ್ಷರ ಓದುವದಕ್ಕಿಂತ ಮನೋರಂಜನಾ / ಕಾಮಿಡಿ ವಿಡಿಯೋ ನೋಡುವದು ಜಾಸ್ತಿ. ಅದಕ್ಕೇ ಕೇವಲ ವಿಡಿಯೋ ಆಧಾರಿತ ಎಪ್ ಗಳು ಜನಪ್ರಿಯತೆ  ಜಾಸ್ತಿ ಆಗುತ್ತಿರುವದು.

ಕಾರಣ ೭: ದ್ವೇಷ ಪೂರಿತ, ಗುಪ್ತ ಅಜೆಂಡಾ ಇರುವ ಪೋಸ್ಟ್ ಗಳು


 ಚಿತ್ರಕೃಪೆ:   Andre Hunter ಇಂದ Unsplash

ಇಂದು ಫೇಸ್ ಬುಕ್ ಅನೇಕ ಜನರ ಹಿಡನ್ ಅಜೆಂಡಾ ಹಂಚುವ ತಾಣ ಆಗಿದೆ. ಜನರ ಮಧ್ಯೆ  ಜಾತಿ, ಮತ, ಭಾಷೆ, ಪಕ್ಷ ಹೀಗೆ ಹಲವು ಆಧಾರದ ಮೇಲೆ ವೈಮನಸ್ಸು ಮೂಡಿಸುವ ಪೋಸ್ಟ್ ಹಾಕುವ ಅಡ್ಡಾ ಆಗಿದೆ. 

ಇವೂ ಕೂಡಾ ಜನರು ಫೇಸ್ ಬುಕ್ ನಿಂದ ವಿಮುಖರಾಗಲು ಕಾರಣ ಇರಬಹುದು. ಇದನ್ನು ತಡೆಯಲು ಫೇಸ ಬುಕ್ ಕಠಿಣ ಕ್ರಮ ಕೈಗೊಳ್ಳುತ್ತಿದೆ. ಆದರೂ ಇದು ಸಾಲುತ್ತಿಲ್ಲ.

ಇನ್ನೊಂದು ವಿಷಯ ಏನೆಂದರೆ ಫೇಸ್ ಬುಕ್ ಅಲ್ಲಿ ಆರ್ಟಿಪಿಶಿಯಲ್ ಇಂಟೆಲಿಜೆನ್ಸ್ ಬಳಸಿ ನಿಮಗೆ ಏನು ಇಷ್ಟ ಇಲ್ಲವೋ ಅದನ್ನು ಅಡಗಿಸಿಡುವ ತಂತ್ರಜ್ಞಾನ ಇದೆ. ಆದ್ದರಿಂದ ಈ ಸಮಸ್ಯೆ ಎಲ್ಲರಿಗೂ ಇರಲಾರದು.

ಕೊನೆಯ ಮಾತು


 ಚಿತ್ರಕೃಪೆ:  Dima Solomin ಇಂದ Unsplash

ಫೇಸ್ ಬುಕ್ ಸೆಚುರೇಶನ್ ಹಂತ ತಲುಪಿದ ಹಾಗಿದೆ . ಕೇವಲ ಹೊಸ ಪರಿಕಲ್ಪನೆಯೊಂದೇ ಫೇಸ್ ಬುಕ್ ಅನ್ನು ಇನ್ನಷ್ಟು ಬೆಳೆಸ ಬಹುದು. ಈಗ ಕೇವಲ ಫೇಸ್ ಬುಕ್ ಬೆಳವಣಿಗೆ ಸ್ವಲ್ಪ ಕಡಿಮೆ ಆಗಿದೆ ಅಷ್ಟೇ. ಫೇಸ್ ಬುಕ್ ಖಂಡಿತ ಹಲವು ಬದಲಾವಣೆ ತಂದು ಇನ್ನಷ್ಟು ಹೊಸತನ ತರುವ ಸಾಧ್ಯತೆ ಇದೆ.

ಮುಂದಿನ ಪೀಳಿಗೆಯ ಆಸಕ್ತಿ ಗಮನದಲ್ಲಿಟ್ಟು ಬದಲಾವಣೆ ತಂದರೆ ಉತ್ತಮ.

ಈಗ ನೋಡಿದರೆ ಟಿಕ್ ಟಾಕ್, ಇನ್ಸ್ಟಾಗ್ರಾಂ ಹಾಗೂ ಯೂಟ್ಯೂಬ್ ಇವು ಮುಂದಿನ ಪೀಳಿಗೆಯ ಸೋಶಿಯಲ್ ಮಿಡಿಯಾ ಆಗುವ ಲಕ್ಷಣ ಕಾಣಿಸುತ್ತಿದೆ.

ಮೆಟಾವರ್ಸ್ ಎಂಬ ಹೊಸ ಪರಿಕಲ್ಪನೆಯ ಮೇಲೆ ಫೇಸ್ ಬುಕ್ ಸ್ಥಾಪಕ ಮಾರ್ಕ್ ಝುಕರ್ ಬರ್ಗ್ ಕೆಲಸ ಮಾಡುತ್ತಿದ್ದಾರೆ. ಅದಕ್ಕೆ ತಮ್ಮ ಕಂಪನಿಯ ಹೆಸರನ್ನು ಇತ್ತೀಚೆಗೆ ಮೆಟಾ ಎಂದು ಬದಲಾಯಿಸಿದ್ದಾರೆ.

ಮೆಟಾವರ್ಸ್ ವರ್ಚುವಲ್ ರಿಯಾಲಿಟಿ, ಹೋಲೋಗ್ರಾಂ ಪ್ರೊಜೆಕ್ಟರ್, ಟಚ್ ಸಿಮ್ಯುಲೇಶನ್ ಕೈ ಗವಸು ಇತ್ಯಾದಿ ಬಳಸಿ ಆಳವಾದ ಅನುಭೂತಿ ಕೊಡುವ ಸಾಧ್ಯತೆ ಇದೆ. ಅದೇನಾದ್ರೂ ಯಶಸ್ವಿಯಾದ್ರೆ ಫೇಸ್ ಬುಕ್ ನಾಗಾಲೋಟಕ್ಕೆ ಮಿತಿ ಇಲ್ಲ.

ಈ ಮೆಟಾವರ್ಸ ಪರಿಕಲ್ಪನೆಯ ಯಶಸ್ಸಿನ ಮೇಲೆ ಮೆಟಾ ಭವಿಷ್ಯ ಕೂಡಾ ನಿಂತಿದೆ. ಆದರೆ ಅದು ಕಾರ್ಯರೂಪಕ್ಕೆ ಬರಲು ಸಮಯ ಬೇಕು.

ಮಾರ್ಕ್ ಝುಕರ್ ಬರ್ಗ್ ಸುಮ್ಮನೆ ಕೈ ಕಟ್ಟಿ ಕೂರುವ ಜಾಯಮಾನದವರಲ್ಲ. ಆದ ಕಾರಣದಿಂದಲೇ ಕಳೆದ 17 ವರ್ಷಗಳಿಂದ ಫೇಸ್ ಬುಕ್ ಪ್ರಪಂಚದ ನಂ 1 ಸೋಷಿಯಲ್ ಮಾಧ್ಯಮ ಆಗಿರುವದು.

ಸ್ಮಾರ್ಟ್ ಫೋನ್ ಕ್ರಾಂತಿಯ ಸಂದರ್ಭ ದಲ್ಲೂ ಫೇಸ್ ಬುಕ್ ಚಾಲೆಂಜ್ ಎದುರಿಸಿ ಯಶಸ್ವಿಯಾಗಿದೆ. ಈಗಲೂ ಫೇಸ್ ಬುಕ್ ಗೆ ನಿಭಾಯಿಸುವ ಸಾಮರ್ಥ್ಯ ಇದೆ. ಸರಿಯಾಗಿ ಕಾರ್ಯಗತ ಗೊಳಿಸಿದರೆ ಅಸಾಧ್ಯದ ಮಾತಲ್ಲ.

ಇನ್ನೇನು ಆಗುತ್ತೆ ಎಲ್ಲ ಕಾಲವೇ ನಿರ್ಧರಿಸುತ್ತದೆ. ಕಾಲನ ಒಡಲಾಳದಲ್ಲಿರುವ ಈ ರಹಸ್ಯ ತಿಳಿಯಲು ಕಾಯದೇ ಬೇರೆ ವಿಧಿ ಇಲ್ಲ.

ನೀವು ಯಾವ ಯಾವ ಸೋಶಿಯಲ್ ಮಿಡಿಯಾ ಎಪ್ ಬಳಸುತ್ತೀರಿ?  ನಿಮಗೆ ಏನು ಕಾರಣ ಅನ್ನಿಸುತ್ತೆ? ಕಮೆಂಟ್ ಅಲ್ಲಿ ತಿಳಿಸಿ.

ಈ ಲೇಖನ ಹೇಗನಿಸಿತು? ಹೇಗೆ ಇನ್ನೂ ಇಂಪ್ರೂವ್ ಮಾಡಬಹುದು? ಕಮೆಂಟ್ ಹಾಕ್ತೀರಾ? ನಿಮ್ಮ ಗೆಳೆಯರಿಗೆ ಇದು ಇಷ್ಟ ಆಗುತ್ತೆ ಅನ್ನಿಸಿದರೆ ಅವರಿಗೂ ಶೇರ್ ಮಾಡಿ. ಸರಿನಾ? ವಂದನೆಗಳು.

0

ಕಾಮೆಂಟ್‌ಗಳಿಲ್ಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಅನಿಸಿಕೆ ಏನು? ತಿಳಿಸಿ.

Advertisement

blogger
© ಎಲ್ಲಾ ಹಕ್ಕುಗಳನ್ನು ಕಾದಿರಿಸಲಾಗಿದೆ, ಅನುಮತಿ ಇಲ್ಲದೇ ಲೇಖನಗಳನ್ನು ನಕಲು ಮಾಡುವಂತಿಲ್ಲ.
ವಿಸ್ಮಯನಗರಿ.ಕಾಂ